Thursday, January 24, 2013

ಆಡುಮಾತಿನ ಅರಿಮೆಯ ಪದಗಳು ಮತ್ತು ಕಲಿಕೆ


ಕನ್ನಡಕ್ಕೆ ಅರಿಮೆಯ ಹೊಸ ಪದಗಳನ್ನು ಉಂಟು ಮಾಡುವಾಗ ಸಾಮಾನ್ಯವಾಗಿ ಸಂಸ್ಕೃತದಿಂದ ಪದಗಳನ್ನು ಎರವಲು ತರಲಾಗುತ್ತದೆ. ಇದರ ಬದಲಾಗಿ ಕನ್ನಡದ್ದೇ ಆಡುಮಾತಿನ ಪದಗಳನ್ನು ಬಳಸುವುದರಿಂದ ಆಗುವ ಅನುಕೂಲಗಳು ತುಂಬಾ ಇವೆ. ಇದು ಕಲಿಕೆಯಲ್ಲಿ ತುಂಬಾ ಮುಖ್ಯವಾದ ಒಂದು ವಿಚಾರ. ಇದರ ಬಗ್ಗೆ ಚೆನ್ನಾಗಿ ಅರಿಯಬೇಕೆಂದರೆ ನಮ್ಮ ಕನ್ನಡ ಮಾಧ್ಯಮ ಪಾಟ ಪುಸ್ತಕಗಳನ್ನು ಒಮ್ಮೆ ತೆರೆದು ನೋಡಬೇಕು. ಸಂಸ್ಕೃತದ ಎರವಲಿನಿಂದ ಹುಟ್ಟಿರುವ ನೂರಾರು ಪದಗಳು ಕಾಣಸಿಗುತ್ತವೆ. ಉದಾಹರಣೆಗೆ 'ತಲೆಕೆಳಗು' ಎಂದು ಸುಲಭವಾಗಿ ಹೇಳಬಹುದಾದುದನ್ನು 'ವ್ಯುತ್ಕ್ರಮ'  ಅಂತಲೂ, 'ಸದಾಹಸಿರು ಕಾಡು' ಇದನ್ನು ನಿತ್ಯ 'ಹರಿದ್ವರ್ಣ ಅರಣ್ಯ' ಅಂತಲೂ ಕರೆಯಲಾಗಿದೆ. ಇದರ ಅರ್ಥ ತಿಳಿದುಕೊಳ್ಳುವುದು ಮಕ್ಕಳಿಗೆ ಕಷ್ಟ, ತಿಳಿದರೂ ಹೆಚ್ಚುಕಾಲ ನೆನಪಿನಲ್ಲಿರುವುದಿಲ್ಲ.
ಹತ್ತನೆಯ ತರಗತಿಯ ಗಣಿತ ಪುಸ್ತಕದ ಒಂದು ಭಾಗ.

ಕನ್ನಡ ಮಾದ್ಯಮದಲ್ಲಿ ಓದಿದ ನನಗೆ ಇವತ್ತಿಗೂ 'ಅಬಿದಮನಿ', 'ಅಪದಮನಿ' ಅಂದರೆ ಏನು ಎಂಬುದರ ಬಗ್ಗೆ ಅನುಮಾನ ಇದೆ. ಶಾಲೆಯ ದಿನಗಳಲ್ಲಿ ಕಷ್ಟ ಪಟ್ಟು ನೆನಪಿನಲ್ಲಿ ಇಟ್ಟುಕೊಂಡಿದ್ದೆ ಆದರೆ ಈಗ ನೆನಪಿಲ್ಲ. ಇದೇ ರೀತಿಯ ಹಲವಾರು ಪದಗಳು ಇವೆ ಉದಾಹರಣೆಗೆ  'ಹೃತ್ಕರ್ಣ' , 'ಹೃತ್ಕಕ್ಷಿ', 'ಧ್ಯುತಿ ಸಂಶ್ಲೇಷಣೆ ಕ್ರಿಯೆ', 'ಯಾದ್ರಚ್ಚಿಕ ಪುಟ'  ಈ ಪದಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಇದಕ್ಕೆ ಆಡು ಮಾತಿನ ಕನ್ನಡ ಪದಗಳು ಬೇಕು. ಇದರಿಂದ ಮಕ್ಕಳಿಗೆ ಸುಲಭವಷ್ಟೇ ಅಲ್ಲದೆ ಉರು ಹೊಡೆದು ನೆನಪಿಟ್ಟು ಕೊಳ್ಳುವ ಕಷ್ಟ ತಪ್ಪುತ್ತದೆ. ಆಶ್ಚರ್ಯದ ವಿಷಯವೆಂದರೆ ಕನ್ನಡದೆನ್ನಲಾಗಿರುವ ಈ ಪದಗಳು ಇಂಗ್ಲಿಷ್‍ನ ಪದಗಳಷ್ಟೇ ಅಪರಿಚಿತ ಮತ್ತು ನೆನಪಿನಲ್ಲಿಟ್ಟುಕೊಳ್ಳುವುದು ಕೂಡ ಕಷ್ಟದ ಕೆಲಸ.

ಹಾಗಾಗಿ ಯಾವುದೇ ಅರಿಮೆಯ ಪದ ಆಡು ಮಾತಿನಲ್ಲಿದ್ದರೆ ಅದು ಕಲಿಕೆಯನ್ನು ಹಗುರವಾಗಿಸುತ್ತದೆ ಹಾಗೂ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಕಲಿಕೆಯ ಮಟ್ಟವನ್ನು ಮೇಲೆತ್ತಲು ಸಹಾಯವಾಗುತ್ತದೆ. ಈ ಅಂಶಗಳನ್ನು ಕಲಿಕೆಯ ಪರಿಣಿತರು, ಪಾಟ ಪುಸ್ತಕವನ್ನು ಬರೆಯುವವರು ಗಂಬೀರವಾಗಿ ನೋಡಿ ಪುಸ್ತಕಗಳಲ್ಲಿ ಆಡು ಮಾತಿನ ಸುಲಭ ಪದಗಳನ್ನು ಬಳಸಿ ಮಕ್ಕಳ ಕಲಿಕೆಯನ್ನು ಇನ್ನಷ್ಟು 'ಅರ್ಥಪೂರ್ಣ'ವಾಗಿಸಬೇಕಿದೆ.

2 comments:

Unknown said...

ದ್ವಿಪದ ಕರಣಿಗಳ ಅಕರಣಿಕಾರಕ? ಏನು ಸ್ವಾಮೀ ಹೀಗಂದರೆ? ಅದಾವ ಮಹಾನುಬಾವರು ಇಂತಹ ಪದಗಳನ್ನು ಹುಟ್ಟುಹಾಕಿದರೋ? ಬಡಪಾಯಿ ಕನ್ನಡ ಮಾದ್ಯಮದ ಮಕ್ಕಳಿಗೆ ನರಕ ಯಾತನೆ ಕೊಟ್ಟು ಅದಾವ ಸಾದನೆ ಮಾಡಬೇಕು ಅಂತ ಇದ್ದಾರೆ ನಮ್ಮ ಶಿಕ್ಶಣ ಅರಿಗರು?
ಬಾಳ್ತೆಯ ಬರಹ ಬರೆದಿದ್ದೀರಿ, ಗಿರೀಶ್.

ಗಿರೀಶ್ ಕಾರ್ಗದ್ದೆ said...

@ರಾಜ್, ನನ್ನಿ. ಈ ಪದಗಳು ನನಗೂ ಸಹ ಅರ್ಥವಾಗಿಲ್ಲ.